ಶನಿವಾರ, ನವೆಂಬರ್ 16, 2013

ಕೃತಕ ಉಪಗ್ರಹದಲ್ಲಿ ಸಂವೇದಕಗಳು

ಕನ್ನಡ ವಿಜ್ಞಾನ ಸಾಹಿತ್ಯದಲ್ಲಿ ಮೂಡಿಬಂದಿರುವ ನನ್ನ ಮೊದಲ ಪುಸ್ತಕ.
 
ಕನ್ನಡ ಮಾಧ್ಯಮದ ಪ್ರಾಥಮಿಕ ಹಾಗೂ ಮಾಧ್ಯಮಿಕ ತರಗತಿಗಳಲ್ಲಿ ಓದುತ್ತಿರುವ ಬಾಲವಿಜ್ಞಾನಿಗಳು ಹಾಗೂ ಬಾಹ್ಯಾಕಾಶದ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಮಾಹಿತಿ ನೀಡುವ ಪುಸ್ತಕ.
 
ಉಪಗ್ರಹಗಳು ನಮ್ಮ ದಿನ ನಿತ್ಯದ ಜೀವನದಲ್ಲಿ ನಮಗೆ ಗೊತ್ತಿಲ್ಲದಂತೆ ಪ್ರವೇಶ ಪಡೆದಿವೆ. ಅವುಗಳು ನೀಡುವ ಅನೇಕ ಮಾಹಿತಿಗಳು ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ದೂರಸಂಪರ್ಕ, ದೂರದರ್ಶನ, ಹವಾಮಾನದ ಸ್ಥಿತಿ-ಗತಿ, ಸಮುದ್ರದಲ್ಲಿರುವ ಜಲಚರಗಳ ಮಾಹಿತಿ, ಭೂ ಸಂಪನ್ಮೂಲಗಳ ಮಾಹಿತಿ.... ಒಂದೇ, ಎರಡೇ....ಇವೆಲ್ಲವುಗಳು ಉಪಗ್ರಹಗಳ ಮೂಲಕ ನಮ್ಮನ್ನು ತಲುಪುತ್ತವೆ. ಈ ಎಲ್ಲ ಮಾಹಿತಿಗಳನ್ನು ಪಡೆಯಲು ಉಪಗ್ರಹಗಳು ವಿವಿಧ ಕಕ್ಷೆಗಳಲ್ಲಿ ಸುತ್ತುತ್ತಿರಬೇಕು, ಪೂರ್ವ ನಿರ್ಧಾರಿತವಾದಷ್ಟು ವಾಲಿರಬೇಕು, ಭೂಮಿಯನ್ನು ಸದಾಕಾಲ ನೋಡುತ್ತಿರಬೇಕು. ಇಷ್ಟೆಲ್ಲಾ ಇದ್ದಾಗ ಮಾತ್ರ ನಿಖರವಾದ ಮಾಹಿತಿಗಳು ನಮಗೆ ಸಿಗುತ್ತವೆ. ಸ್ವಲ್ಪ ಆ ಕಡೆ-ಈ ಕಡೆ ಕದಲಿದರೂ ನಮಗೆ ತಲುಪಬೇಕಾದ ಮಾಹಿತಿ ತಲುಪದು!
 
ಹಾಗಾದರೆ ಬಾಹ್ಯಾಕಾಶದ ನಿರ್ವಾತದಲ್ಲಿ ಯಾವುದೇ ಲಂಗು-ಲಗಾಮಿಲ್ಲದೆ ಉಪಗ್ರಹಗಳು ನಿರ್ದಿಷ್ಟ ಸ್ಥಾನ-ಸ್ಥಿತಿಯಲ್ಲಿ ಹೇಗಿರುತ್ತವೆ? ಹೌದು... ಈ ಕೆಲಸಕ್ಕಾಗಿ ಅವುಗಳಲ್ಲಿ ‘ಕಿವಿ-ಕಣ್ಣು’ಗಳನ್ನು ಅಳವಡಿಸಿರುತ್ತಾರೆ! ಉಪಗ್ರಹದಲ್ಲಿ ಅಳವಡಿಸುವ ಸಂವೇದಕಗಳೇ ಅವುಗಳ ಕಣ್ಣುಗಳು, ಕಿವಿಗಳು!! ಈ ಹೊತ್ತಿಗೆಯಲ್ಲಿ ಉಪಗ್ರಹದಲ್ಲಿ ಅಳವಡಿಸಿರುವ ಸಂವೇದಕಗಳ ಬಗ್ಗೆ ಮಾಹಿತಿಯನ್ನು ಕಿರಿಯರು ಅರ್ಥೈಸಿಕೊಳ್ಳುವ ರೀತಿಯಲ್ಲಿ ಸರಳವಾಗಿ ಪೋಣಿಸಲಾಗಿದೆ.

ಸಂವೇದನೆ ಎಂದರೇನು? ಪಂಚೇಂದ್ರಿಯಗಳ ಮೂಲಕ ನಾವು ಯಾವ ಯಾವ ಸಂವೇದನೆಗಳನ್ನು ಪಡೆಯುತ್ತೇವೆ ಎಂಬ ವಿವರಣೆಗಳೊಂದಿಗೆ ಆರಂಭವಾಗುವ ಈ ಪುಸ್ತಕ, ಮುಂದಿನ ಪುಟಗಳಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಕಾಣಬರುವ ಹಲವು ಸಂವೇದಕಗಳನ್ನು ಪರಿಚಯಿಸುತ್ತದೆ. ಈ ಸರಳ ತತ್ವಗಳನ್ನು ಕೃತಕ ಉಪಗ್ರಹವೊಂದರ ಕಾರ್ಯನಿರ್ವಹಣೆಗೆ ಏಕೆ ಮತ್ತು ಹೇಗೆ ಬಳಸಬೇಕಾಗುತ್ತದೆ ಎಂಬುದರ ವಿವರಣೆಗಳು ನಂತರದಲ್ಲಿವೆ.

ಬುಧವಾರ, ಅಕ್ಟೋಬರ್ 31, 2012

ಕರ್ನಾಟಕ ಮಾತೆ – ಭುವನೇಶ್ವರಿ


 
 
“ಜಯ್ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!”. ಕುವೆಂಪು ಅವರ ಈ ಸಾಲುಗಳನ್ನು ನೆನೆಯುತ್ತಾ ಕನ್ನಡಾಂಬೆಯ ದೇಗುಲದ ಬಗ್ಗೆ ಬರೆಯುತ್ತಿದ್ದೇನೆ. ಹೌದು, ಮಾತೆ ಭುವನೇಶ್ವರಿ ಕನ್ನಡ ಮತ್ತು ಕರ್ನಾಟಕದ ಆರಾಧ್ಯ ದೈವ. ವೈವಿಧ್ಯಗಳ ತವರಾದ ಕರ್ನಾಟಕದ ನೆಲದಲ್ಲಿರುವ ಏಕೈಕ ಕನ್ನಡಾಂಬೆಯ ದೇಗುಲ ಇರುವುದು ನಿಸರ್ಗದ ಸಿರಿ ಸಂಪತ್ತಿನಿಂದ ಕೂಡಿರುವ ಬಯಲುಸೀಮೆ, ಮಲೆನಾಡು ಮತ್ತು ಕರಾವಳಿಯನ್ನು ತನ್ನೊಡಲಲ್ಲಿ ಲಾಲಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ.
 


ಬೆಂಗಳೂರಿನಿಂದ ಸಿದ್ದಾಪುರಕ್ಕಿರುವ ಅಂತರ ಸರಿಸುಮಾರು ೩೯೦ ಕಿ. ಮೀ. ಅಲ್ಲಿಂದ ಕುಮಟಾಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೮ ಕಿ. ಮೀ. ಕ್ರಮಿಸಿದರೆ ಬಲ ಬದಿಯಲ್ಲಿ ಒಂದು ವಿಶಾಲವಾದ ಕೆರೆ ಕಂಡುಬರುತ್ತದೆ. ಅದರ ಸಮೀಪದಲ್ಲಿ ಬೆಟ್ಟವೇರಲು ಮೆಟ್ಟಿಲುಗಳಿವೆ. ಕೆರೆಯಿಂದ ಸುಮಾರು ೩೦೦ ಅಡಿಗಳ ಎತ್ತರದಲ್ಲಿ ಭುವನಗಿರಿಯ ಮೇಲೆ ಮಾತೆ ಭುವನೇಶ್ವರಿಯ ದೇವಾಲಯವಿದೆ. ಬೆಟ್ಟವೇರಲು ವಾಹನಗಳಿಗೆ ಕಿರಿದಾದ ರಸ್ತೆಯೂ ಇದೆ.

ಕನ್ನಡಾಂಬೆ ಭುವನೇಶ್ವರಿ ದೇವಾಲಯದ ಬಗ್ಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ.
ಪೌರಾಣಿಕ ಹಿನ್ನೆಲೆ: ಇಲ್ಲಿನ ದಟ್ಟ ಕಾನನದಲ್ಲಿ ಭುವನಾಸುರನೆಂಬ ಒಬ್ಬ ರಾಕ್ಷಸನಿದ್ದನಂತೆ. ಆತನ ಮಿತಿಮೀರಿದ ಉಪಟಳದಿಂದ ಜನರು ನೆಮ್ಮದಿಯಿಂದ ಬಾಳಲು ಆಗುತ್ತಿರಲಿಲ್ಲವಂತೆ. ಜನರ ಪ್ರಾರ್ಥನೆಯನ್ನು ಕೇಳಿದ ದುರ್ಗಾಮಾತೆ ಪ್ರತ್ಯಕ್ಷಳಾಗಿ ಆತನನ್ನು ವಧಿಸಲು ಅಣಿಯಾದ ಸಮಯದಲ್ಲಿ ತಾನು ಸದಾಕಾಲ ಜನರಿಗೆ ಪರಿಚಿತನಾಗಿರುವಂತಹ ವರವನ್ನು ದಯಪಾಲಿಸು ಎಂದು ಕೇಳಿದನಂತೆ. ತಥಾಸ್ತು ಎಂದ ದುರ್ಗಾ ಮಾತೆಯು ಈ ಸ್ಥಳವು ಭುವನಗಿರಿಯೆಂದು ಕರೆಯಲ್ಪಡುವುದು ಮತ್ತು ನಾನು ಈ ಕ್ಷೇತ್ರದಲ್ಲಿ  ಭುವನೇಶ್ವರಿಯಾಗಿ ನೆಲೆಸಿ ನಾಡನ್ನು ಕಾಯುತ್ತೇನೆ ಎಂದಳಂತೆ.

ಐತಿಹಾಸಿಕ ಹಿನ್ನೆಲೆ: ವಿವಿಧ ಮೂಲಗಳ ಪ್ರಕಾರ ಬಿಳಗಿಯ ಅರಸರು ಕನ್ನಡ ನುಡಿಯ ಹಾಗೂ ನಾಡಿನ ಬಗ್ಗೆ ಅಪಾರ ಅಭಿಮಾನ ಉಳ್ಳವರಾಗಿದ್ದರು. ಅವರಿಗೆ ಕನ್ನಡಮಾತೆಗಾಗಿ ಒಂದು ಗುಡಿ ಕಟ್ಟಿಸುವ ಬಯಕೆ ಇತ್ತು. ಬಿಳಗಿಯ ಅರಸರಲ್ಲಿ ಕೊನೆಯವರಾದ ಬಸವೇಂದ್ರ ಈ ದೇವಾಲಯನ್ನು ೧೬೯೨ರಲ್ಲಿ ಕಟ್ಟಿಸಿದರು ಎಂದು ತಿಳಿದು ಬರುತ್ತದೆ.

ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವ‌ನ್ನು ಕಾಣಬಹುದು.
 

ಕನ್ನಡ ತಾಯಿ ಭುವನೇಶ್ವರಿ

 
 
 

ಕನ್ನಡ ತಾಯಿ ಭುವನೇಶ್ವರಿ ದೇವಾಲಯವಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ. ನಿಸರ್ಗ ರಮಣೀಯತೆಗೆ ಹೆಸರಾದ ಉತ್ತರ ಕನ್ನಡದ ಮಲೆನಾಡಿನಲ್ಲಿ ಇರುವ ಈ ದೇವಾಲಯ ನಮ್ಮ ನಾಡಿನ ಏಕೈಕ ಭುವನೇಶ್ವರಿ ಮಾತೆಯ ದೇವಾಲಯ.

ಭಾನುವಾರ, ಆಗಸ್ಟ್ 12, 2012

ನಾಟ್ಯಕ್ಕೆಅಣಿಯಾಗುತ್ತಿರುವ ನವಿಲು...!

 



ಮೋಡಗಳು ಬಾನಲ್ಲಿ ತುಂಬಿ ಮಳೆ ಹನಿಸಲು ಶುರುವಾಗುತ್ತಿರುವಾಗ ಗರಿ ಬಿಚ್ಚಿ ಕುಣಿಯಲು ಅಣಿಯಾಗುತ್ತಿರುವ  ನವಿಲು.


ಚಲಿಸುವ ಸೂರ್ಯ !

ಪುಟಾಣಿಗಳ  ಜಾರು ಬಂಡಿಯಾಟಕ್ಕೆ ಮನಸೋತ ನೇಸರ



ಪುಟ್ಟ ಮಕ್ಕಳು ಜಾರು ಬಂಡಿಯಲ್ಲಿ ಆಡುವುದನ್ನು ಕಂಡ ಸೂರ್ಯ ತಾನು ಎರಡು ತಂತಿಗಳ ನಡುವೆ ಜಾರೋಣ ಎಂದು ಆಟಕ್ಕೆ ಇಳಿದಂತಿದೆ.

ಭಾನುವಾರ, ಮೇ 27, 2012

ಏನಿದು......?


ಏನಿದು ? ನೋಡಲು ಕಾಳ್ಗಿಚ್ಚು ಅನ್ನಿಸುತ್ತಿದೆಯೇ? ಆದರೆ ಇದು ಬೆಂಕಿಯಲ್ಲ !
ಒಂದು ಮುಂಜಾವಲ್ಲಿ ಕಂಡುಬಂದ ಸೂರ್ಯೋದಯದ ದೃಶ್ಯ !